*ಶ್ರೀ ರಾಮಸುಂದರವಿಟ್ಠಲ ದಾಸರ ಕೃತಿ*
(ರಾಮಸುಂದರವಿಟ್ಠಲ ದಾಸರ ಕಾಲ ಕ್ರಿ.ಶ 19 - 20 ನೆಯ ಶತಮಾನ. ಶ್ರೀಜಗನ್ನಾಥದಾಸರಿಂದ ಪ್ರಭಾವಿತರಾದವರು. ಸ್ಥಳ ಆದವಾನಿ)
*ರಾಗ ಮೋಹನ ಖಂಡಛಾಪುತಾಳ*
ಪೋಗಿ ಬರುವೆ ಗೋಪ ನಾಗವೇಣಿಯರೆ ಚ - ।
ನ್ನಾಗಿ ಮಮತೆ ಪೂರ್ಣವಾಗಿರಲಿ ॥ ಪ ॥
ಜಾಗು ಮಾಡದೆ ಮುಂದೆ ವೇಗದಿಂದಲಿ ಎನ್ನ ।
ಸಾಗೀಸೀ , ಪತಿಗಳ ಕೂಡೆ ।
ಭೋಗೀಸೀ , ತತ್ಸೇವೆ ಮಾಡಲು ॥
ಪೋಗುವುದು ಪಾಪೌಘವೆಲ್ಲವು ನೀಗುವುದು ಹೃದ್ರೋಗ ಮಂಗಳ ।
ವಾಗುವುದು ಲೇಸಾಗಿ ಹರುಷಿತರಾಗಿ ಕಳುಹಿರಿ ಈಗ ಮಧುರೆಗೆ ॥ ಅ ಪ ॥ಬಾಲಕತನದಿ ನಿಮ್ಮಾಲಯವನೆ ಪೊಕ್ಕು ।
ಪಾಲು ಮೊಸರು ಬೆಣ್ಣೆ ಕದ್ದು ಮೆದ್ದು ॥
ಜಾಲದಿಂದಲಿ ನಿಮ್ಮ ಬಾಲರು ತಿಂದರೆಂ ।
ದ್ಹೇಳೀದೇ , ಮೃಷವಾಡಿ ನಾನು।
ಬಾಳೀದೇ , ಮೇಲಿಟ್ಟ ಭಾಂಡವ ।
ಸೀಳೀದೇ , ಮಥಿಸುವ ಸುಪಾತ್ರೆಯ ।
ಕಾಲಿಲೊದ್ದು ಬೀಳ ಕೆಡಹಿದೆನೇ , ನವನೀತವನು ಮಾ ।
ರ್ಜಾಲ ಮರ್ಕಟ ಪಾಲ ಮಾಡಿದೆನೇ , ನೀವಿಟ್ಟ ಮೀಸಲ ।
ಶೀಲದಧಿ ಕೆನೆಪಾಲ ಕೆಡಿಸಿದೆನೇ , ಹೀಗುಚಿತವಲ್ಲೆಂ ॥
ದ್ಹೇಳಿದರೆ ಕೇಳದಲೆ ನಾನತಿ ಹೇಳನೆಯ ಬಲು ಧಾಳಿ ಮಾಡಲು ।
ತಾಳಿ ಎನ್ನನು ಪಾಲಿಸಿದಿರಿ ಕೃಪಾಳುಗಳ ಗುಣ ಪೇಳಲೊಶವೆ ॥ 1 ॥ಫುಲ್ಲಲೋಚನೆರ ನಿಮ್ಮೆಲ್ಲರ ಮನಸು ಎ ।
ನ್ನಲ್ಲಿ ಇಟ್ಟಿರುವದ ಬಲ್ಲೆ ಕೇಳಿ ॥
ಇಲ್ಲೇ ನಿಮ್ಮನು ಬಿಟ್ಟು ಎಲ್ಲೋ ಪೋಗುವೆನೆನ್ನ ।
ಸಲ್ಲಾದೇ , ಕಾರ್ಯವೆ ಮುಖ್ಯ ।
ವಲ್ಲಾದೇ , ಬರುವೆನೆ ಅಲ್ಲಿ ।
ನಿಲ್ಲಾದೇ , ಬ್ರಹ್ಮಾಂಡದೊಳಗಾ ।
ವಲ್ಲಿ ನೆನೆಸಿದರಲ್ಲಿ ನಾನಿರುವೇ , ನಾನಿಲ್ಲದಾ ಸ್ಥಳ ।
ವಿಲ್ಲ ಜಗದೊಳಗೆಲ್ಲ ತುಂಬಿರುವೇ , ಆದರಿಸಿ ಕರೆದವ ।
ರಲ್ಲಿ ಅತಿ ತ್ವರದಲ್ಲಿ ಬರುತಿರುವೇ , ಈ ವಿಧದಿ ಪೇಳ್ವದು ॥
ಸುಳ್ಳು ಮಾತುಗಳಲ್ಲಿ ಆಗಮದಲ್ಲಿ ಪೇಳಿದ ಸೊಲ್ಲು ಎಂಬುದ ।
ರಲ್ಲಿ ಸಂಶಯವಿಲ್ಲದಲೆ ನೀವೆಲ್ಲಿ ಸ್ಮರಿಸಿದರಲ್ಲಿಗೊದಗುವೆ ॥ 2 ॥ಹಿಂದಕ್ಕೆ ಒಂದಿನ ನಿಂದು ಕೊಳಲೂದೆ ಸ್ತ್ರೀ ।
ವೃಂದ ಕೇಳುತಲಿ ಆನಂದದಿಂದಾ ॥
ಅಂದು ಬರುತಿರೆ ನಿಮ್ಮ ಬಂಧುಗಳೆಲ್ಲ ನಿ ।
ರ್ಬಂಧೀಸೀ , ಬೇಡೆನ್ನಲವರ ।
ನಿಂದೀಸೀ , ಎನ್ನೊಳು ಮನಸು ।
ಪೊಂದೀಸೀ , ಬೆಳದಿಂಗಳೊಳು ತ್ವರ ।
ದಿಂದ ಎನ್ನನು ಬಂದು ಕೂಡಿದಿರೇ , ರಾಸೋತ್ಸವದಿ ।
ಧಿಂ ಧಿಂ ಧಿಮೀಧಿಮಿಕೆಂದು ಆಡಿದಿರೇ , ಕೀರ್ತಿಯನು ಪದಗತಿ ।
ಯಿಂದ ಸುಖಕರದಿಂದ ಪಾಡಿದಿರೇ , ಬಲ್ಪರಿಯಲಿ ಎ ॥
ನ್ನಿಂದ ಬಂದ ನಿಂದೆ ಕುಂದುಗಳೊಂದು ಎಣಿಸದೆ ಪೊಂದಿದಿರಿ ಎಂ ।
ತೆಂದು *ಶ್ರೀರಾಮಸುಂದರವಿಟ್ಠಲಿಂದು* ಮುಖಿಯರಿಗಿಂದು ಮೋದದಿ ॥ 3 ॥

YOU ARE READING
ದಾಸ ಸಾಹಿತ್ಯ
Poezie*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...