*ಭೀಮನ ಅಮಾವಾಸ್ಯೆ*
*ಆಷಾಢ ಬಹುಳ ಅಮಾವಾಸ್ಯೆ* ದಿನದಂದು ಆಚರಿಸುವ ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಪತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದೂ ಕರೆಯುವುದುಂಟು. ಆದರೆ, ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ.
ಈ ವ್ರತವನ್ನು ಮಾಡುವುದರಿಂದ ಕನ್ಯೆಯರು ಉತ್ತಮ ಗುಣವುಳ್ಳ ಪತಿಯನ್ನೂ, ಮತ್ತು ಸಹೋದರರು ಕ್ಷೇಮವನ್ನೂ ಮತ್ತು ವಿವಾಹಿತ ಸ್ತ್ರೀಯರು ಸೌಭಾಗ್ಯವನ್ನು ಪಡೆಯುತ್ತಾರೆ. ಈ ವ್ರತವನ್ನು ಮನೋ ನಿಯಾಮಕರಾದ ಪಾರ್ವತಿ ಮತ್ತು ರುದ್ರದೇವರ ಅನುಗ್ರಹ ಪ್ರಾಪ್ತಿಗಾಗಿ ಆಚರಿಸುತ್ತಾರೆ. ಮದುವೆಯಾದ ಮೊದಲ ಒಂಭತ್ತು ವರ್ಷ ಈ ವ್ರತವನ್ನು ಹೆಣ್ಣುಮಕ್ಕಳು ಮತ್ತು ಕನ್ಯೆಯರು ಮಾಡುತ್ತಾರೆ.
ಮಣ್ಣಿನಿಂದ ಲಿಂಗಾಕಾರದಲ್ಲಿ ವಿಗ್ರಹ ಮಾಡಿ, ಅದರಲ್ಲಿ ಪಾರ್ವತೀ ಪರಮೇಶ್ವರನನ್ನು ಆಹ್ವಾನಿಸಿ ಪೂಜಿಸುತ್ತಾರೆ. ನೈವೇದ್ಯಕ್ಕೆ ಕಡುಬು / ಇಡ್ಲಿ ಸಿದ್ಧಪಡಿಸುತ್ತಾರೆ. ಈ ಕಡುಬಿನಲ್ಲಿ ಚಿಲ್ಲರೆಯನ್ನು ಇಟ್ಟು ಅದನ್ನು ಹೊಸ್ತಿಲ ಎರಡೂ ಬದಿಯಲ್ಲಿ ವಿಳ್ಳೆದೆಲೆ ಮೇಲಿಟ್ಟು ಹರಿದ್ರಾ ಕುಂಕುಮದಿಂದ ಪೂಜಿಸಿ ಮನೆಯ ಗಂಡುಮಕ್ಕಳು ಕೈಲಿ ಅ ಕಡುಬನ್ನು ಅವರ ಮಂಡಿಯೂರಿ ಮೊಣಕೈನಿಂದ ಒಡೆಯಬೇಕು. ಆ ಸಮಯದಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳ ಬೆನ್ನಿಗೆ ಹೊಡೆಯುತ್ತಾರೆ. ಇದನ್ನು *ಭಂಡಾರ ಒಡೆಯುವುದು* ಎನ್ನುತ್ತಾರೆ. ಈ ದಿನ ಕರಿದ ಪದಾರ್ಥಗಳನ್ನು ಮಾಡುವುದಿಲ್ಲ.
*ಭೀಮ* ಕೂಡ ರುದ್ರದೇವರ ಹಲವಾರು ಹೆಸರುಗಳಲ್ಲಿ ಒಂದು. ಈ ಹಬ್ಬಕ್ಕೆ ಭೀಮನೆಂಬ ರುದ್ರದೇವರ ಹೆಸರಿನಿಂದ ಪೂಜಿಸುತ್ತಾರೆ.
ಈ ವ್ರತದ ಮಹಿಮೆಯನ್ನು ಸಾಕ್ಷಾತ್ ಮಹರುದ್ರದೇವರೇ ಹೇಳಿದ್ದಾರೆ.
ವ್ರತಕಥೆಯ ಸಂಕ್ಷಿಪ್ತ ಕಥೆ ಹೀಗಿದೆ. :ಹಿಂದೆ ಸೌರಾಷ್ಟ್ರ ದೇಶದಲ್ಲಿ *ವಜ್ರಬಾಹು* ಎಂಬ ಉತ್ತಮ ಆಡಳಿತಗಾರ ರಾಜನಿದ್ದನು. ಅವನಿಗೆ ಸುಂದರನೂ, ಗುಣವಂತನೂ ಆದ ಜಯಶೀಲನೆಂಬ ಮಗನಿದ್ದನು. ಆದರೆ ಇನ್ನೂ ವಿವಾಹವೂ ಆಗದ ಪುತ್ರನು ಮೃತನಾಗಲು, ರಾಜನು ತನ್ನ ಪಿತೃಗಳಿಗೆ ಯಾರು ತಿಲೋದಕವನ್ನು ಕೊಡುತ್ತಾರೆ ಎಂದು ಆಘಾತದಿಂದ , ತನ್ನ ಮಗನಿಗೆ ವಿವಾಹ ಮಾಡಿದರೆ ಆ ಹೆಣ್ಣಿನ ಮೂಲಕ ಪಿತೃಗಳಿಗೆ ಸದ್ಗತಿ ನೀಡಬಹುದೆಂದು ಯೋಚಿಸಿದನು. ಯಾರು ತನ್ನ ಮೃತ ಪುತ್ರನ ವಿವಾಹಕ್ಕೆ ಹೆಣ್ಣು ಕೊಡುತ್ತಾರೋ ಅವರಿಗೆ ಯಥೇಶ್ಚ ದಾನ ಕೊಡುವುದಾಗಿ ಘೋಷಿಸುತ್ತಾನೆ. ಅದೇ ಊರಿನಲ್ಲಿದ್ದ ಒಬ್ಬ ಬಡ ಸುಸಂಸ್ಕೃತ ಬ್ರಾಹ್ಮಣನು ತನ್ನ ಬಡತನದಿಂದ ದೂರಬರಲು ನಿರ್ಧರಿಸಿ, ತನ್ನ ಮಗಳನ್ನು ಆ ಮೃತ ರಾಜಕುಮಾರನಿಗೆ ಕೊಟ್ಟು ವಿವಾಹ ಮಾಡಿದನು. ತನಗೆ ಬರಬೇಕಾದ ಧನಧಾನ್ಯಾದಿಗಳನ್ನು ಆ ಬ್ರಾಹ್ಮಣ ಪಡೆದುಕೊಳ್ಳುತ್ತಾನೆ