*ತಾಂಬೂಲದ ಮಹತ್ತ್ವ! |*
*೧) ತಾಂಬೂಲವನ್ನು ಕೊಡುವ ರೀತಿ:-
ತಾಂಬೂಲವನ್ನು ಕೊಡಬೇಕು, ಪೃಚ್ಛಕ ದೈವಜ್ಞನಿಗೆ "ಪ್ರಾಭೃತ" ಎಂದರೆ ಒಂದು ಹರಿವಾಣದಲ್ಲಿ ವಿವಿಧವಾದ ಸುವಸ್ತುಗಳನ್ನು ಇಟ್ಟು ಕೊಡಬೇಕು. ಅದರಲ್ಲಿ ಯಾವುದನ್ನು ತಪ್ಪದೇ ಇಟ್ಟಿರಬೇಕು ಎಂದರೆ, ತಾಂಬೂಲವನ್ನು ತಪ್ಪದೇ ಇಟ್ಟಿರಬೇಕು. ತಾಂಬೂಲಕ್ಕೆ ಒಂದು ಮಹತ್ವ ಇದೆ ಆದರೆ ಇವತ್ತು ಬೇರೆ ತರಹ ಆಗಿದೆ. ಇವತ್ತು ಯಾರಾದರೂ ತಾಂಬೂಲ ಚರ್ವಣ ಮಾಡುತ್ತಾರೆ ಎಂದರೆ ಅವರನ್ನು ಸ್ವಲ್ಪ ಓರೆ ಕಣ್ಣಿನಿಂದ ನೋಡುವಂತಹ ಸಂದರ್ಭ ಇದೆ . ಆದರೆ ಹಿಂದೊಂದು ಕಾಲದಲ್ಲಿ ತಾಂಬೂಲಕ್ಕೆ ತುಂಬಾ ಮಹತ್ವ ಇದ್ದಿದ್ದನ್ನು ಕಾಣುತ್ತೇವೆ.೨)ತಾಂಬೂಲ ಇಲ್ಲದೆ ಪೂರ್ತಿ ಆಗುವುದಿಲ್ಲ: -
ಉದಾಹರಣೆಗೆ: ದೇವಪೂಜೆ; ದೇವರ ಪೂಜೆ ತಾಂಬೂಲ ಇಲ್ಲದೆ ಪೂರ್ತಿ ಆಗುವುದಿಲ್ಲ ತಾಂಬೂಲ ಎಲ್ಲಿ ಬರುತ್ತದೆ? ಧೂಪಂ ಸಮರ್ಪಯಾಮಿ, ದೀಪಂ ಸಮರ್ಪಯಾಮಿ, ನೈವೇದ್ಯಂ ಸಮರ್ಪಯಾಮಿ, "ತಾಂಬೂಲಂ ಸಮರ್ಪಯಾಮಿ". ನಾವು ಹೇಗೆ ಊಟ ಆದಮೇಲೆ ತಾಂಬೂಲ ಹಾಕಿಕೊಳ್ಳುತ್ತೇವೋ ಅದೇ ತರಹ ದೇವರಿಗೂ ನೈವೇದ್ಯ ಆದ ಮೇಲೆ ತಾಂಬೂಲವನ್ನು ಸಮರ್ಪಣೆ ಮಾಡಬೇಕು.
ಗುರು ಪೂಜೆಯಲ್ಲಿಯೂ ಇದೆ, ಪಾದುಕಾ ಪೂಜೆ ಮಾಡುತ್ತಾರಲ್ಲ ಅಲ್ಲಿಯೂ ಕೂಡಾ ಇದೆ. *"ತಾಂಬೂಲಂ ಮುಖರಾಗಾರ್ಥಂ ಲವಂಗೈಲಾದಿಸಂಯುತಂ ಪರ್ಣಕ್ರಮುಖಕರ್ಪೂರಚೂರ್ಣಕಸ್ತೂರಿಮಿಶ್ರಿತಂ"* ಇದನ್ನು ಪಾದುಕಾ ಪೂಜೆಯಲ್ಲಿ ಹೇಳುತ್ತಾರೆ. ನೋಡಿ, ಗುರು ಪೂಜೆಯಲ್ಲಿಯೂ ಕೂಡ ಇದೆ, ಅಲ್ಲಿಯೂ
ತಾಂಬೂಲ ಕೊಡುತ್ತಾರೆ.
, ವಿಪ್ರರಿಗೆ ದಕ್ಷಿಣೆ ಕೊಡುವ ಪದ್ಧತಿ ಹೇಗೆ ಎಂದರೆ, ಈ ತಾಂಬೂಲದ ಪಟ್ಟಿಯ ಮೇಲೆ ಇಟ್ಟು ಕೊಡಬೇಕು ಅಲ್ಲವಾ? ದಕ್ಷಿಣೆಯನ್ನು ತಾಂಬೂಲದ ಜೊತೆ ಕೊಡಬೇಕು.
ಆಹ್ವಾನ; ಯಾವುದೇ ಒಂದು ವಿಶಿಷ್ಟವಾದ ಆಹ್ವಾನ ಇದ್ದರೆ ಅಲ್ಲಿ ವೀಳ್ಯ ಬೇಕು, ವೀಳ್ಯ ಕೊಟ್ಟು ಆಮಂತ್ರಣ ಮಾಡಬೇಕು. ಆಗ ಆಮಂತ್ರಣಕ್ಕೆ ತುಂಬಾ ತೂಕ ಬರುತ್ತದೆ. ಈ ಯಕ್ಷಗಾನ ಮೇಳಗಳು ಈಗ ಕೂಡ ಈ ಪದ್ಧತಿಯನ್ನು ಇಟ್ಟುಕೊಂಡಿದೆ. ಮೇಳ ನಮ್ಮಲ್ಲಿಗೆ ಬಂದು ಯಕ್ಷಗಾನ ಆಗಬೇಕು ಎಂದರೆ ನೀವು ವೀಳ್ಯ ಕೊಡಬೇಕು. ಇವತ್ತಿಗೂ ಅಂತಹ ಪದ್ಧತಿಗಳು ಕೆಲವೊಂದು ಯಕ್ಷಗಾನ ಮೇಳಗಳಲ್ಲಿ ಇದೆ. ಏಕೆಂದರೆ ಆಮಂತ್ರಣಕ್ಕೆ ತೂಕ ಬರಬೇಕು ಎಂದರೆ ಅದಕ್ಕೆ ವೀಳ್ಯ ಸೇರಬೇಕು. ಅದಕ್ಕೆ ಎಲೆ ಮತ್ತು ಅಡಿಕೆ ಸೇರಬೇಕು.
ಯುದ್ಧ ಎಂದುಕೊಳ್ಳಿ, ವೀಳ್ಯದ ಪಾತ್ರ ಯುದ್ಧದಲ್ಲೂ ಇದೆ, "ಧುರವೀಳ್ಯ" ಕೊಡುತ್ತಾರೆ. ಎರಡು ತರಹದಲ್ಲಿ, 'ಧುರವೀಳ್ಯ' ಎಂದರೆ, ಯಾರೋ ಒಬ್ಬರನ್ನು ನಮ್ಮ ಪರವಾಗಿ ಯುದ್ಧಕ್ಕೆ ಕಳುಹಿಸಿಕೊಡಬೇಕು ಆಗ ವೀಳ್ಯ ಕೊಟ್ಟು, ಹೋಗು ನೀನು ಗೆದ್ದು ಬಾ ಎಂದು. ಅಭಿಮನ್ಯುವನ್ನು ರಣಕ್ಷೇತ್ರಕ್ಕೆ ಕಳುಹಿಸಿಕೊಡುವಾಗ ವೀಳ್ಯ ಕೊಟ್ಟುರು ಎಂದು ಯಕ್ಷಗಾನದಲ್ಲಿ ನೋಡುತ್ತೇವೆ. ಹಾಗೆಯೇ ಯುದ್ಧ ನಿಶ್ಚಯಿಸಿ ಬರುವುದಾದರೆ, ಯುದ್ಧಕ್ಕೆ ಆಹ್ವಾನ ಮಾಡುವುದಾದರೆ, ದುರ್ಯೋಧನನಲ್ಲಿಗೆ ಶ್ರೀಕೃಷ್ಣ ಸಂಧಾನಕ್ಕೆ ಹೋಗುತ್ತಾನೆ. ಆಗ ದ್ರೌಪದಿ, ಭೀಮ ಇವರ ಅಭಿಪ್ರಾಯ ಏನೆಂದರೆ, ದುರ್ಯೋಧನನಿಗೆ ನೀನು ಧುರವೀಳ್ಯವನ್ನು ಕೊಟ್ಟು ಬರಬೇಕು. ಅದು ಯುದ್ಧಕ್ಕೆ ಆಹ್ವಾನ. ಆಹ್ವಾನಗಳು ಎಲ್ಲಿಂದ ಎಲ್ಲಿಯವರೆಗೆ ಹೋದರೂ ಕೂಡ ಅಲ್ಲೆಲ್ಲಾ ವೀಳ್ಯದ ಪಾತ್ರ ಇದೆ. ವಾಗ್ದಾನಗಳು ವೀಳ್ಯ ಇಲ್ಲದೆ ಪೂರ್ತಿ ಆಗುವುದಿಲ್ಲ. ವಿವಾಹ ನಿಶ್ಚಯ ಎಂದುಕೊಳ್ಳಿ ತಾಂಬೂಲ ಬದಲಾಯಿಸಕೊಳ್ಳಬೇಕು, ಆಮೇಲೆ ವ್ಯತ್ಯಾಸ ಮಾಡಬಾರದು.
ಭೂವಿಕ್ರಯ ಎಂದುಕೊಳ್ಳಿ, ಜಮೀನು ಕೊಟ್ಟು ತೆಗೆದುಕೊಂಡು ಮಾಡುವಂಥದ್ದು, ಅಲ್ಲಿಯೂ ಕೂಡಾ ವೀಳ್ಯವನ್ನು ಕೊಟ್ಟು ಅದನ್ನು ಪಕ್ಕಾ ಎಂದು ಮಾಡುತ್ತಾರೆ. ಒಂದು ಮಾತು ಬರೀ ಮಾತಲ್ಲ ಅದು 'ಪಕ್ಕಾ' ಎಂದು ಆಗಬೇಕಾದರೆ ಅಲ್ಲಿ ವೀಳ್ಯ ಬೇಕು.
ಜ್ಯೌತಿಷದಲ್ಲಿ ತಾಂಬೂಲ ಬೇಕೇ ಬೇಕು. ಒಂದು ಪ್ರಶ್ನೆ ಚಿಂತನೆ ಮಾಡಬೇಕು ಎಂದಾದರೆ, ತಾಂಬೂಲ ಕೊಟ್ಟೇ ದೈವಜ್ಞನನ್ನು ಪ್ರಶ್ನೆಗೆ ತೊಡಗಿಸಬೇಕು. ಜ್ಯೌತಿಷದಲ್ಲಿ ಅಂಜನ ನೋಡುವುದು ಎಂದಿದೆ, ಅವರು ತಾಂಬೂಲದಿಂದ ನೋಡುತ್ತಾರೆ. ಅನೇಕರು ಈ ಅಂಜನ ನೋಡುವವರು ತಾಂಬೂಲವನ್ನು ಇಟ್ಟುಕೊಂಡು ನೋಡುತ್ತಾರೆ. ತಾಂಬೂಲದಲ್ಲಿ ಏನು ಕಾಣುತ್ತದೆ? ನಮಗೆ ಹಸಿರು, ಒಂದಷ್ಟು ಗೆರೆಗಳು ಕಾಣುತ್ತದೆ ಅಲ್ಲವಾ, ಆದರೆ ಅಲ್ಲಿ ಅವರಿಗೆ ಎಲ್ಲಾ ಕಾಣುತ್ತಿದೆ. ಆ ಕ್ಷೇತ್ರದಲ್ಲಿ ಇರುವವರು ಎಲ್ಲರೂ ಸತ್ಯವಂತರು ಎಂದಲ್ಲ, ಎಲ್ಲವೂ ನಿಜ ಎಂದಲ್ಲ, ಯಾರು ಸರಿಯಾಗಿ ಹೇಳಬಲ್ಲರೋ ಅವರು ಕೇವಲ ತಾಂಬೂಲದಲ್ಲಿ ಎಲ್ಲವನ್ನೂ ಕಂಡು ಹೇಳುತ್ತಾರೆ.