ಶ್ರೀ ದೇವರ ಸಾನ್ನಿಧ್ಯದಲ್ಲಿ
ಏನನ್ನು ಕೋರಬೇಕು ?ಶ್ರೀ ಪುರಂದರದಾಸರ ರಚನೆ -
ಹಾಡಿದರೆ ಎನ್ನ
ಒಡೆಯನ ಹಾಡುವೆ |
ಬೇಡಿದರೆ ಎನ್ನ
ಒಡೆಯನ ಬೇಡುವೆ ||ಅತಿ ಸುಂದರವಾಗಿದೆ.
************
ಈ ಕೃತಿಯಲ್ಲಿ ಎಂಥಹಾ ಆಳವಾದ ಪರಿಕಲ್ಪನೆ, ವೈಭವ, ಭಕ್ತನ ಮನೋಸ್ಥಿತಿ, ದೇವರ ಕಾರುಣ್ಯ, ಭರವಸೆ, ಜೀವನದಲ್ಲಿ ಉತ್ಸಾಹ, ಸಂತೋಷ, ನೆಮ್ಮದಿ ಎಲ್ಲವನ್ನೂ ಒಟ್ಟಿಗೆ, ಒಂದಾಗಿ ಪರಿಭಾವಿಸುವ ಭಕ್ತನನ್ನು ಕಾಣಬಹುದಾಗಿದೆ.
ತಾಯಿಯ ಗರ್ಭದಲ್ಲಿ ಪ್ರಾರಂಭ ಆಗಿ, ಜನನವಾದ ಮೇಲೆ, ನಮ್ಮ ಜೀವನದ ಎಲ್ಲ ಹಂತಗಳಲ್ಲೂ ಪರಮಾತ್ಮನು ಸಲಹುತ್ತಿರುತ್ತಾನೆ.ಅಂತ್ಯಕಾಲದಲ್ಲೂ ಅವನ ಕಾರುಣ್ಯ ಆಶೀರ್ವಾದ ನಮಗೆ ಅತ್ಯಂತ ಅಗತ್ಯ. ಪ್ರಾಪಂಚಿಕ ಜೀವನದಲ್ಲಿ ಪ್ರತಿಯೊಂದು ಜೀವಿಯು ಅವನ ಮಾರ್ಗದರ್ಶನ ಪಡೆದೇ ಬದುಕಬೇಕು. ಮಾನವನನ್ನು ಹೊರತುಪಡಿಸಿ ಮತ್ಯಾವ ಜೀವಿಯೂ ಭಗವಂತನಿಗೆ ಮೊರೆ ಹೋಗಿ, ನನಗೆ ಇದರ ಅವಶ್ಯಕತೆ ಇದೆ, ಇದು ಬೇಕು, ಇದು ಬೇಡ ಎಂದು ಬೇಡು ವುದಿಲ್ಲ. ಅವನು ಏನು ದಯಪಾಲಿಸಿ ಕೊಟ್ಟಿದ್ದಾನೆ ಅದನ್ನು ಅನುಭವಿಸುತ್ತವೆ. ಸಾವಿನವರಿಗೂ ಯಾವುದೇ ಆಸೆ, ಆಕಾಂಕ್ಷೆ ಇಲ್ಲದೆ, ತಮ್ಮ ಜೀವನವನ್ನು ಪೂರ್ಣಗೊಳಿಸಿ ಕೊಳ್ಳುತ್ತವೆ.
ನಮಗೆ ಪರಮಾತ್ಮನು ದಯಪಾಲಿಸಿದ ಎಲ್ಲವನ್ನೂ ವಿಚಾರ ಮಾಡಿದಾಗ ನಮ್ಮ ಪೂರ್ವ ಪುಣ್ಯ ಅಥವಾ ಪಾಪಕ್ಕೆ ಅನುಗುಣವಾಗಿ ಕೊಟ್ಟಿದ್ದಾನೆ. ಅದನ್ನು ಅನುಭವಿಸುವ ಮೂಲಕ ನಾವು ನಮ್ಮ ಕರ್ಮವನ್ನು ಸವೆಯಬೇಕು.
ಇದರಿಂದ ಯಾರಿಗೂ ಮುಕ್ತಿಯಿಲ್ಲ.ನಮಗೆ ಪೂರ್ವ ಪುಣ್ಯ ಸಂಪಾದನೆ ಆಗಿದ್ದರೆ ಈ ಜನ್ಮದಲ್ಲಿ ಸುಖ, ಸಂಪತ್ತು, ನೆಮ್ಮದಿ, ಆಯುಸ್ಸು, ಅರೋಗ್ಯ, ಹಿರಿಕಿರಿಯರ ಒಡನಾಟ, ಬಂಧು ಬಾಂಧವರ ಸಹಯೋಗ ಎಲ್ಲವೂ ದೊರೆತು ಸಾರ್ಥಕ ಬದುಕು ಸಾಧ್ಯವಾಗುತ್ತದೆ. ಹಾಗೆಯೇ ಪೂರ್ವ ಪಾಪದಿಂದ ಈಗಿನ ಜೀವನಕ್ಕೆ ಬಂದಿದ್ದರೆ, ಅನಾರೋಗ್ಯ, ಅಸಂತೋಷ ಗಳಿಂದ ಜೀವನ ದುರ್ಭರ ಆಗುತ್ತದೆ.
ನಾವು ದೈವಭಕ್ತರಾಗಿದ್ದರೆ ಯಾವುದಾದರೂ ದೈವ ಸನ್ನಿಧಾನಕ್ಕೆ ಭೇಟಿಕೊಡುವ ಪರಿಪಾಠವನ್ನು ಹಿರಿಯರಿಂದ ರೂಢಿಸಿಕೊಂಡು ಬಂದಿರು ತ್ತೇವೆ. ಅದು ಸ್ವಗೃಹದಲ್ಲೇ ದೇವರಮನೆ ಆಗಬಹುದು. ನಾವು ಮೆಚ್ಚಿದ ಹತ್ತಿರದ ಅಥವಾ ದೂರದ ದೇವಸ್ಥಾನ ಆಗಬಹುದು. ಉಡುಪಿ, ಮಂತ್ರಾಲಯ, ತಿರುಪತಿ, ಬದರೀನಾಥ ತೀರ್ಥಕ್ಷೇತ್ರ ಗಳು ಆಗಬಹುದು.