ಶ್ರೀ ವಿಠ್ಠಲ ಪ್ರಸೀದ
ವಿಜಯನಗರ ಸಾಮ್ರಾಜ್ಯ ಭಗ್ನವಾಗುವುದಕ್ಕೆ ಮುನ್ನ ದಾಸವರೇಣ್ಯರಾದ ಪುರಂದರ ದಾಸರು ವೈಕುಂಠ ವಾಸಿಗಳಾದರು.
ಶ್ರೀ ಪುರಂದರ ದಾಸರನಂತರ ಶತಮಾನ ಕಾಲ ದಾಸ ಸಾಹಿತ್ಯ ಮೇರುಗನ್ನು ಕಳೆದುಕೊಂಡಿತ್ತು. ತಮ್ಮ ಶಿಷ್ಯರನ್ನು ಮತ್ತೆ ಉದ್ದೀಪಿಸಿ ದಾಸ ಸಾಹಿತ್ಯದ ಪುನಃ ಉಗಮಕ್ಕೆ ಕಾರಣರಾದವರು ಶ್ರೀ ರಾಘವೇಂದ್ರ ಗುರು ಸಾರ್ವಭೌಮರು.
ಶ್ರೀ ವಿಜಯದಾಸರು, ಶ್ರೀ ಗೋಪಾಲ ದಾಸರು, ಶ್ರೀ ಜಗನ್ನಾಥ ದಾಸರುಗಳು ಶ್ರೀರಾಯರಿಂದ ಪ್ರೇರಿತರಾಗಿ ಭಕ್ತಿ ಗಂಗೆಯನ್ನು ಹರಿಸಿದವರು.
ಅವರಲ್ಲಿ ಶ್ರೀ ವಿಜಯ ದಾಸರ ಕೂಟದಲ್ಲಿ ವಿಶೇಷವಾಗಿ ಗುರುತಿಸಿ ಕೊಂಡವರು ಇಂದಿನ ಆರಾಧನೆಯ ನಾಯಕರು.
ರಾಯಚೂರು ಜಿಲ್ಲೆಯ ದೇವದುರ್ಗದ ಗ್ರಾಮ ಮೊಸರುಕಲ್ಲಿನವರು. ಮುರಾರಿರಾಯ ವೆಂಕಮ್ಮ ದಂಪತಿಗಳ ಪುತ್ರ. ಬಾಗಣ್ಣ ಎನ್ನುವ ನಾಮಧೇಯ. ತೀರಾ ಬಡತನ. ತಾಯಿ ಮತ್ತು ತಮ್ಮಂದಿರೊಡನೆ ಹುಟ್ಟೂರು ತ್ಯಜಿಸಿ ಉತ್ತನೂರಿಗೆ ಪಯಣ.
ಪ್ರಾಣದೇವರ ಗುಡಿಯಲ್ಲಿದ್ದು ಏಕಾಗ್ರತೆಯಿಂದ ವಿಶೇಷ ಧ್ಯಾನಾದಿಗಳಲ್ಲಿ ಮಗ್ನರಾಗಿ ಗಾಯತ್ರಿ ಮಂತ್ರವನ್ನು ಸಿದ್ದಿಸಿಕೊಂಡರು. ಗಾಯತ್ರಿಯ ಪೂರ್ಣ ಅನುಗ್ರಹವಾಗಿ ಅವರು ಆಡಿದ ಮಾತುಗಳೇಲ್ಲಾ ನಿಜವಾಗುವಂತಾಯಿತು. ಪ್ರಾಣದೇವರ ಆಶ್ರಯ ತೆಗೆದುಕೊಂಡರೆ ಸುಮ್ಮನೆಯೇ. ಅವರ ಕೀರ್ತಿ ಸುತ್ತಲೂ ಪಸರಿಸಿ ಗದ್ವಾಲ ಸಂಸ್ಥಾನದ ದೊರೆ ರಾಜರಾಮ ನ ತನಕ ಮುಟ್ಟಿತು.
ದೊರೆ ಖುದ್ದು ಬಂದು ಭವಿಷ್ಯವಾಣಿಯನ್ನು ಆಲಿಸಿದ. ಭಾಗಣ್ಣನ ವಾಕ್ ಶಕ್ತಿಗೆ ಬೆರಗಾಗಿ ಧನಕನಕ ವಸ್ತು ವಾಹನ (ಕುದುರೆ )ಗಳನ್ನು ಸಮರ್ಪಿಸಿದ.
ಮುಂದೆ ಭಾಗಣ್ಣ ಆದವಾನಿಯ ದೀವಾನ್ ತಿಮ್ಮಣ್ಣನವರ ಬಳಿ ಇದ್ದಾಗ "ವೆಂಕಟ ಕೃಷ್ಣ "ಎಂಬ ಅಂಕಿತದಿಂದ ಕೃತಿ ರಚನೆ ಮಾಡಿದ್ದಾರೆ. ಮುಂದೆ ವಿಜಯದಾಸರ ಅನುಗ್ರಹದಿಂದ ಗೋಪಾಲವಿಠ್ಠಲ ಎಂಬ ಅಂಕಿತ ಪ್ರಾಪ್ತವಾಯಿತು.
ಈ ಅಂಕಿತದಿಂದ ಅನೇಕ ಕೀರ್ತನೆಗಳನ್ನು, ಸುಳಾದಿಗಳನ್ನು ರಚಿಸಿದರು. ತಮ್ಮ ಸೋದರರಿಗೆ ದಾಸದೀಕ್ಷೆ ನೀಡಿ ನೂರಾರು ಜನರನ್ನು ದಾಸಮಾರ್ಗದಲ್ಲಿ ಕರೆದೋಯ್ದರು.
ಕನ್ನಡ ಶ್ರೀಮನ್ಯಾಯಸುಧ ಎಂದು ಕರೆಸಿಕೊಳ್ಳುವ ಶ್ರೀ ಹರಿಕಥಾಮೃತ ಸಾರ ರಚಿಸಿದ ಜಗನ್ನಾಥ ದಾಸರಿಗೆ ತಮ್ಮ ಆಯುಷ್ಯದ ನಲ್ವತ್ತು ವರ್ಷ ದಾನಮಾಡಿದ ತ್ಯಾಗಮೂರ್ತಿಗಳು.
ಹೆಳವನ ಕಟ್ಟೆ ಗಿರಿಯಮ್ಮ ನವರಿಗೆ, ಆಕೆ ಹಾಕಿದ್ದ ರಂಗವಲ್ಲಿಯಲ್ಲಿ ಶ್ರೀಕೃಷ್ಣನನ್ನು ತೋರಿದವರು.
ಜ್ಞಾನಿ ವೆಂಕಟರಾಮಾಚಾರ್ಯರಿಗೆ ವಾಸುದೇವ ವಿಠ್ಠಲ ಎಂಬ ಅಂಕಿತನೀಡಿದವರು. ಮುಂದೆ ಅವರೇ ಶ್ರೀ ವ್ಯಾಸ ತತ್ವಜ್ಞರು.
ಅನೇಕ ತೀರ್ಥಯಾತ್ರೆಗಳನ್ನು ಶಿಷ್ಯರ ಜೊತೆ ಮಾಡಿದಾಗ ಫಂಡರಾಪುರದವಿಠ್ಠಲ ಕುದುರೆಸವಾರನಾಗಿ ಬಂದು 'ತನ್ನ ದರ್ಶನಕ್ಕೆ ಬರುವುದಿಲ್ಲವೇ' ಎಂದಾಗ ಫಂಡರಾಪುರಕ್ಕೂ ಭೇಟಿನೀಡುತ್ತಾರೆ.
ಇದಲ್ಲದೇ ಅದ್ಭುತ ಕಲಾವಿದರು ಗೋಪಾಲದಾಸರು. ಬ್ರಹ್ಮಾಂಡದ ಚಿತ್ರಪಟವನ್ನು ಪ್ರಮಾಣಬದ್ದವಾಗಿ ರಚಿಸಿದವರು. ಶ್ರೀ ವಿಜಯದಾಸರ ಕಂಕಣ ಸುಳಾದಿಯನ್ನು ಚಕ್ರಾಬ್ಜ ಮಂಡಲದೊಳಿಟ್ಟು ಬೀಜಾಕ್ಷರ ಯಥಾಸ್ಥಾನದೊಳಿಟ್ಟು ಉಪಾಸನೆಗೆ ಭಕ್ತವೃಂದಕ್ಕೆ ಅನುವು ಮಾಡಿಕೊಟ್ಟವರು ಮಹಾನುಭಾವರಾದ ಗೋಪಾಲದಾಸರು. ಅದಲ್ಲದೆ ತಂತ್ರಸಾರೋಕ್ತವಾಗಿ ಭಗವದ್ ಮೂರ್ತಿಯನ್ನು ನಿರ್ಮಿಸಿ ಪೂಜಿಸುತ್ತಿದ್ದರು.
ಇಷ್ಟೆಲ್ಲಾ ಪ್ರತಿಭೆಯಿಂದ ಕೂಡಿದ ತನ್ನ ಭಕ್ತರಿಗೆ ಭಗವಂತ ಸುಖ ಪ್ರಾರಬ್ಧಯೋಗ ಕೊಟ್ಟಿದ್ದ.
ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದ ಅವರು ರಚಿಸಿದ " ರಥಾವಾನೇರಿದ ರಾಘವೇಂದ್ರ - ರಾಯ ಗುಣ ಸಾಂದ್ರ ಬಹು ಪ್ರಸಿದ್ಧವಾದ ಕೀರ್ತನೆ. ರಾಯರ ಮೂರೂ ಅವತಾರಗಳನ್ನು ಈ ಕೃತಿಯಲ್ಲಿ ಸ್ಮರಿಸಿದ್ದಾರೆ. ಇಂಥಾ ಭಕ್ತವರೇಣ್ಯ
ಭಕ್ತಿಯಲ್ಲಿ ಭಾಗಣ್ಣ ಎಂಬ ಬಿರುದಾಂಕಿತಾರಾದ ಶ್ರೀ ಗೋಪಾಲದಾಸರ ಆರಾಧನೆ ಇಂದು
ಆ ಕುರಿತಾಗಿ ಭಕ್ತಿಯ ಸ್ಮರಣೆ
ನಾಹಾಂ ಕರ್ತಾ ಹರಿಃ ಕರ್ತಾ ಶ್ರೀಗೋಪಾಲ ವಿಠ್ಠಲಾರ್ಪಣಾಮಸ್ತು
YOU ARE READING
ದಾಸ ಸಾಹಿತ್ಯ
Poetry*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...