ಶ್ರೀ ವೇಣುಗೋಪಾಲದಾಸಾರ್ಯ

2 0 0
                                    

**

*ಸೃಷ್ಟಿಕ್ರಿಯಾ ಸುಳಾದಿ*
( ಶ್ರೀಹರಿ ಸೃಷ್ಟ್ಯಾದಿ ಅಷ್ಟ ಕರ್ತೃ ಸ್ವತಂತ್ರನು )

*ರಾಗ ಸಾರಂಗ*

*ಝಂಪೆತಾಳ*

ಅಷ್ಟ ಮಹಾ ಮಂತ್ರಗಳು ನಿಷ್ಟಿಯಿಂದಲಿ ಕ್ಷುತು
ತೃಷ್ಣಿಗಳ ಕಟ್ಟಿ ಸಂತತ ಮಾಡಲು
ಸ್ಪಷ್ಟವಾಗುವದೇನೊ ನಿನಗೆ ಜ್ಞಾನವು ಬಲು
ಕಷ್ಟವಲ್ಲದೆ ಬರಿದೆ ಮನುಜ ಕೇಳೊ
ದೃಷ್ಟಿಯನು ಮುಚ್ಚಿ ಪ್ರತಿಷ್ಟಿಯಲಿ ಅಂಗಗಳು
ಬೊಟ್ಟಿಲಿಂದಲಿ ಎಷ್ಟು ಮುಟ್ಟಲೇನು
ಬೆಟ್ಟವನು ಏರಿ ಬಿಸಲೊಳಗೆ ಬಳಲಿಸಿ ದೇಹ -
ಪುಷ್ಟವನು ತೊರೆದರೆ ಇಷ್ಟವಾಹದೆ
ಅಷ್ಟ ಮದಗಳು ಮುರಿದು ನಷ್ಟ ವಿಷಯವ ಜರಿದು
ಅಷ್ಟು ಇಷ್ಟೆಂದು ಹರಿ ಕೊಟ್ಟದೆನ್ನದೆ
ಮುಟ್ಟಿ ಮನವನು ತಿಳಿಯೊ ಸೃಷ್ಟಿಯೆ ಮೊದಲಾದ
ಅಷ್ಟ ಕರ್ತು ಜಗಕೆ ವಿಷ್ಣು ಎಂದೂ
ಗಟ್ಟಿ ಭಕುತಿಯಿಂದ ವಿಟ್ಠಲನ ದಾಸರಲ್ಲಿ
ಇಟ್ಟ ಚಿತ್ತಗೆ ದುರಿತ ಮುಟ್ಟುವವೆ
ಸೃಷ್ಟೇಶ ನಮ್ಮ ಸಿರಿ  *ವೇಣುಗೋಪಾಲ* ವರ
ಕೊಟ್ಟ ಬಳಿಕ ಕೆಡರು ಅನಂತ ಕಲ್ಪಕ್ಕು ॥ 1 ॥

*ಮಟ್ಟತಾಳ*

ಸಿರಿದೇವಿ ತುತಿಸಲು ಕೇಳಿ ಆತುಮ
ಸೃಷ್ಟಿಯನು ಮಾಡಿದ
ತರುವಾಯ ಮೊತ್ತಾದಿ ದೇವರಿಗೆ
ಇತ್ತು ಸೂಕ್ಷ್ಮ ದೇಹ ತೆತ್ತು
ವರಗಳ ತೆಗೆದು ವಿಸ್ತಾರ ಮಾಡಿ ಸ -
ರ್ವೋತ್ತಮ ಸಿರಿಹರಿ ಸೃಜಿಸಿದ ಬ್ರಹ್ಮಾಂಡ
ಹತ್ತು ನಾಲಕು ಲೋಕ ಸಪ್ತಸಾಗರ ಪ -
ರ್ವತ್ತವೆ ಮೊದಲಾದ ಜಡ ಸೃಷ್ಟಿಯನು ಮಾಡಿ
ತೆತ್ತಿಸರ ಸಕಲ ಸ್ಥಳಗಳ ಸೇರಿಸೆ
ಇತ್ತ ಸಕಲ ಜನಕೆ ಸ್ಥೂಲ ದೇಹವನಿತ್ತು
ತತ್ತ ಸ್ಥಾನದಲ್ಲಿ ತಾನು ವ್ಯಾಪಿಸಿ ಸಕಲ
ಕರ್ತೃತ್ವ ಹರಿಯಾಗಿ ಸೃಜಿಸುವ ಸರ್ವರಿಗೆ
ಮಿತ್ರನು ತಾನಾಗಿ ಮನುಜನೊಳಗೆ ನಿಂದು
ಚಿತ್ರ ಪುತ್ರ ಗೃಹಾಮೋದ ಕ್ರಿಯಾ ಪೊತ್ತು
ಪತ್ನಿಗೆ ಸರ್ವ ದ್ವಾರದಿ ಕಾರಣನೋ
ಸತ್ಯಸಂಕಲ್ಪ ಸಿರಿ *ವೇಣುಗೋಪಾಲನ್ನ*
ಸತ್ಯ ಸೃಷ್ಟಿಯ ವಿವರವನು ತಿಳಿದವ ಬಲು ಧನ್ಯಾ ॥ 2 ॥

*ರೂಪಕತಾಳ*

ಸಿರಿ ವಿರಿಂಚಿ ಮೊದಲಾದ ತೃಣಾಂತ ಈ
ಗಿರಿ ವನಧಿ ಲೋಕಗಳು ವನಜಜಾಂಡವ
ಹರಿ ತಾನು ವ್ಯಾಪಿಸಿ ಒಬ್ಬರಿಂದ ಒಬ್ಬರ ಪಾಲಿಸುವ
ನರ ನಾಡಿ ನೊಳಗಿದ್ದು ಕುಟುಂಬ ರಕ್ಷಿಸುವ
ಧರೆ ಪತಿಗಳೊಳಗಿದ್ದು ಪೋಷಿಸುವ
ನರ ತಿರಿಯಾದಿ ನಾನಾ ಜೀವರಾಸಿಗೆ ಪರಿ
ಪರಿ ಪರಿಯ ಗ್ರಾಸವ ಸೃಜಿಸಿಟ್ಟು ಅವರವರ
ಅರಿತು ಕಾಲಗಳನ್ನು ಮೀರಗೊಡದೆ ದೇವನು
ಮರಿಯಾಗಿ ಸರುವರನ ಪೊರೆವನು ಭಾರಕರ್ತಾ
ಇರೊದು ಇನ್ನಿದರೊಳು ಬಲು ಪರಿ ವಿಧ
ಅರಿತ ಮಾನವನಿಗೆ ಸರಿಯಿಲ್ಲ ಧರೆಯೊಳು
ಪರಮ ಕಾರುಣಿಕ ಸಿರಿ  *ವೇಣುಗೋಪಾಲ* ವಿ -
ಸ್ತರ ಮಹಿಮನೆಂದು ಪೊಗಳುವನೆ ಸುಗುಣಾ ॥ 3 ॥

ದಾಸ ಸಾಹಿತ್ಯWhere stories live. Discover now