ಶ್ರೀವಾಗೀಶ ತೀರ್ಥ

1 0 0
                                    

*ಶ್ರೀಂ ಶ್ರೀ ಕಂ ಕಪಿಲಾಯ ನಮಃ*

*ವಾಸುದೇವ ಪದದ್ವಂದ್ವ ವಾರಿಜಾಸಕ್ತ ಮಾನಸಂ/* *ಪದವ್ಯಾಖ್ಯಾನ ಕುಶಲಂ ವಾಗೀಶ ಯತಿಮಾಶ್ರಯೇ//*

ಇಂದು ಶ್ರೀಮತ್ಕವೀಂದ್ರತೀರ್ಥರ ವರಕುವರರು 14 ನೇ ಶತಮಾನದ ಯತಿಗಳಾದ, *ರಾಗವರ್ಜಿತ ಭಾಗವತರ ಪಾಲ,ಯೋಗ ಶಿರೋಮಣಿ ವಾಗೀಶಮುನಿಪ* ಎಂದು ಶ್ರೀಪ್ರಾಣೇಶದಾಸರಿಂದ ಮತ್ತು *ಯೋಗಿ ಎನಿಸಿ ಹರಿ ಭಾಗ್ಯವ ಸವಿಯುತ ಯೋಗ್ಯ ಪಥವ ತೋರ್ದ ವಾಗೀಶ ತೀರ್ಥರ* ಎಂದು *ಧೀರವಿಠಲ* ಅಂಕಿತಸ್ಥರಾದ  ಕಂಪಲಿ ನಿವಾಸಿಗಳಾಗಿದ್ದ ಶ್ರೀಧೀರಣ್ಣನವರಿಂದ  ಸ್ತುತಿಸಲ್ಪಟ್ಟ,  ಶ್ರೀ *ವಾಗೀಶತೀರ್ಥರ* ಆರಾಧನಾ ಮಹೋತ್ಸವ  (ನವವೃಂದಾವನ)

ಮತ್ತೆ....

ಶ್ರೀಮದಾಚಾರ್ಯರ ತಮ್ಮಂದಿರಾದ ಶ್ರೀವಿಷ್ಣುತೀರ್ಥರ ಪರಂಪರೆಯಲ್ಲಿ ಬಂದವರು, ಶ್ರೀವರದರಾಜ ತೀರ್ಥರ ಶಿಷ್ಯರೂ, ನಮ್ಮನ್ನೆಲ್ಲಾ ತಾಯಿಯಂತೆ ಇಂದೂ ಅನುಗ್ರಹಿಸುತ್ತಿರುವ   ಋಜುಪುಂಗವರಾದ  ಶ್ರೀವಾದಿರಾಜರನ್ನು ಜಗತ್ತಿಗೆ ನೀಡಿದಂತಹ ಶ್ರೀವಾಗೀಶ ತೀರ್ಥರ ಉತ್ತರ ಆರಾಧನೆ. ಮೂವತ್ತೇಳು ವರ್ಷಗಳ ಕಾಲ ಪೀಠವನ್ನಾಳಿದ ಶ್ರೀವಾಗೀಶ ತೀರ್ಥರು, ರಾಮಾಚಾರ್ಯರ ದಂಪತಿಗಳಿಗೆ ಅನುಗ್ರಹಿಸಿ ತಮ್ಮ ಶಿಷ್ಯರನ್ನು ಪಡೆದರು. ಕುಂಭಾಸಿ ಮಠದಲ್ಲೇ ಹೆಚ್ಚು ಕಾಲಗಳಿದ್ದು ಅಲ್ಲಿಯೇ ಜಪ ತಪ ಪಾಠ ಪೂಜಾದಿಗಳನ್ನು ಮಾಡಿಕೊಂಡಿದ್ದ ಶ್ರೀವಾಗೀಶ ತೀರ್ಥರು  ಚೈತ್ರ ಬಹುಳ ದ್ವಿತೀಯದಂದು ಉಡುಪಿಯ ಶ್ರೀಕೃಷ್ಣನ ಸನ್ನಿಧಾನದಲ್ಲೇ ಬೃಂದಾವನಸ್ಥರಾದರು. ಅವರನ್ನು ವಿಶೇಷವಾಗಿ ಸೇವೆ ಮಾಡಿ ಫಲ ಪಡೆದ ಭಕ್ತರು ಅವರ ಬೃಂದಾವನಕ್ಕೆ ಹಿತ್ತಾಳೆಯ ಕವಚ ಮಾಡಿಸಿ ಸಮರ್ಪಿಸಿದ್ದಾರೆ.
ಶ್ರೀವಾದಿರಾಜ ಗುರುಸಾರ್ವಭೌಮರನ್ನು ಜಗತ್ತಿಗೆ ನೀಡಿದ *ಶ್ರೀವಾಗೀಶ ತೀರ್ಥರ* ಪರಮಾನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತಾ...

ಹಾಗೆಯೇ....

*ಸುಧಾಸೇವ ಸಮದ್ಭೂತ ಸುಖಸಂವಿತ್ಸಮಾಶ್ರಯಂ /*
*ಸುಜನಾಭೀಷ್ಟದಾತಾರಂ ಸುಭೋದೇಂದ್ರಗುರುಂ ಭಜೇ*//

ಶ್ರೀ ಭುವನೇಂದ್ರತೀರ್ಥರ ಕರಕಮಲ ಸಂಜಾತರು, 18 ನೇ ಶತಮಾನದ ಯತಿಗಳಾದ *ಶ್ರೀಸುಬೋಧೇಂದ್ರತೀರ್ಥರ* ಆರಾಧನಾ ಮಹೋತ್ಸವವೂ..

ಪೂರ್ವಾಶ್ರಮದ ಮುದ್ದುಕೃಷ್ಣಾಚಾರ್ಯರೆಂಬುವ ಅಖಂಡ ಪಾಂಡಿತ್ಯವುಳ್ಳ ಜ್ಞಾನಿಗಳನ್ನು ಶ್ರೀಭುವನೇಂದ್ರ ತೀರ್ಥರು ಆಶ್ರಮವಿತ್ತು *ಶ್ರೀಸುಬೋಧೇಂದ್ರ ತೀರ್ಥರು* ಎಂದು ನಾಮಕರಣ ಮಾಡಿದರು. ಪೀಠಸ್ಥರಾದ ಕೆಲವೇ ದಿನಗಳಲ್ಲಿ ಸಂಚಾರ ಕೈಗೊಂಡ ಶ್ರೀಗಳವರು,ಕನಕಗಿರಿ ಮುಂತಾದ ಊರುಗಳಲ್ಲಿ ಅನೇಕ  ಸ್ಥಳಗಳನ್ನು ಉಂಬಳಿಯಾಗಿ ಪಡೆದರು. ಮುಂದೆ ಪ್ರಾಣದೇವರ ಜಾಗೃತ ಸನ್ನಿಧಾನವಾದ ಬೊಮ್ಮಗಟ್ಟಿ ಕ್ಷೇತ್ರಕ್ಕೆ ಬಂದಾಗ ಅಲ್ಲಿ ಶ್ರೀರಾಮ,ಸೀತ,ಹನುಮಂತ,ಲಕ್ಷ್ಮಣ, ಗರುಡ ದೇವರ ಪ್ರತಿಷ್ಠಾಪನೆ ಮಾಡಿದ್ದಾರೆ. ಅಲ್ಲಿ ಇದ್ದಾಗಲೇ  ಅವರಿಗೆ ದೇಹಾಲಸ್ಯವುಂಟಾಗಿ ಅಲ್ಲಿಯೇ ಜೊತೆಗಿದ್ದ ಶ್ರೀಧೀರೇಂದ್ರ ತೀರ್ಥರ ಪೂರ್ವಾಶ್ರಮದ ಮಗಳ ಮಗ ಜಯರಾಮಾಚಾರ್ಯರರಿಗೆ ಆಶ್ರಮವಿತ್ತು ಶ್ರೀಸುಜನೇಂದ್ರ ತೀರ್ಥರೆಂದು ನಾಮಕರಣ ಮಾಡಿದರು.ಕೆಲಕಾಲವಾದ ಮೇಲೆ ಅವರ ಆರೋಗ್ಯ ಸುಧಾರಿಸಿದ್ದರಿಂದ ಶಿಷ್ಯರನ್ನು ಹೆಚ್ಚಿನ‌ ವಿದ್ಯಾಭ್ಯಾಸಕ್ಕಾಗಿ ಪುಣೆಗೆ ಕಳುಹಿಸಿದರು.ಹೆಚ್ಚಿನ‌ ವಿದ್ಯಾಭ್ಯಾಸ ಮುಗಿಸಿಬಂದ ಶಿಷ್ಯರನ್ನು ನೋಡಿ, ಸಂತೋಷ ಪಟ್ಟು ವಿಶೇಷವಾಗಿ ಅನುಗ್ರಹಿಸಿದರು. 

ಮಹಾತಪಸ್ವಿಗಳಾದ ಶ್ರೀಸುಬೋಂಧೇಂದ್ರತೀರ್ಥರನ್ನು *ಅಭಯವೀಗಲೆ ಬೇಡೆ -ಗುರು ಸುಬೋಧೇಂದ್ರಾರ್ಯರ ನೋಡೆ ಸಖಿ*
*ಈ ಸಂಯಮಿಗಳ ಕೃಪೆಯೊಂದಿರೆ ಏಸು ಸಾಧನ ಇನ್ನೇತಕೆಲೆ|ನಾಶ ರಹಿತ ವೈಕುಂಠವೇ ಸರಿ ಪ್ರಾಣೇಶವಿಠ್ಠಲನಿವರಲ್ಲಿಹದಕೆ*
ಎಂದು,ಮತ್ತೊಂದು ಕೃತಿಯಲ್ಲಿ  *ತೀರ್ಥಪಾಲಾ ಭಕ್ತಾಧೀನ ತೀರ್ಥಾಂಘ್ರಿ ಪ್ರಾಣೇಶವಿಠಲನ ತೀರ್ಥದೂತ ನೀನಿದ್ದ ಸ್ಥಾನ ತೀರ್ಥವು,ತೀರ್ಥಪ ತೀರ್ಥಪ ತೀರ್ಥಮಾಂ ಪಾಹಿಮಾಂ ಪಾಹಿ|ಪಾಹಿ ಪಾಹಿ ಜಿತಮಾರ ಪಾಹಿ ಸುಬೋಧೇಂದ್ರ ಸಮೀರ*
ಎಂದು ಶ್ರೀಪ್ರಾಣೇಶ ದಾಸರು ತಮ್ಮ ಕೃತಿಗಳಲ್ಲಿ ಭಕ್ತಿಯಿಂದ ಸ್ತುತಿಸಿದ್ದಾರೆ.

ಶ್ರೀಗಳವರ ಮೇಲೆ  ಮೈಸೂರಿನ ಮಹಾರಾಜರಿಗೆ  ಅತ್ಯಂತ ಭಕ್ತಿ. ತಮ್ಮ ಅರಮನೆಗೆ ಶ್ರೀಸುಬೋಧೇಂದ್ರ ತೀರ್ಥರನ್ನು ಮತ್ತು ಅವರ ಶಿಷ್ಯರಾದ ಶ್ರೀಸುಜನೇಂದ್ರ ತೀರ್ಥರನ್ನು ಬರಮಾಡಿಕೊಂಡು ರಾಜೋಪಚಾರ ಸಲ್ಲಿಸಿ,  ನಂಜನಗೂಡಿನಲ್ಲಿದ್ದ ಪೂರ್ಣಯ್ಯನವರ ಛತ್ರವನ್ನೇ ಶ್ರೀಮಠಕ್ಕೆ ಧಾರೆ ಎರೆದು ಕೊಟ್ಟ ಮಹಾರಾಜರು ಆಗಾಗ ಶ್ರೀಗಳವರನ್ನು ಅರಮನೆಗೆ ಬರಮಾಡಿಕೊಂಡು ಸತ್ಕರಿಸಿ ಅವರ  ಅನುಗ್ರಹಕ್ಕೆ ಪಾತ್ರರಾಗಿದ್ದರು.
ನಂಜನಗೂಡಿನಲ್ಲಿಯೇ ಇದ್ದು ತಮ್ಮ ಪಾಠ ಪ್ರವಚನ ಜಪ ತಪ ಅನುಷ್ಠಾನಗಳನ್ನು ಮಾಡುತ್ತಾ ಶ್ರೀಸುಬೋಧೇಂದ್ರ ತೀರ್ಥರು ಚೈತ್ರ ಶುದ್ಧ ತೃತೀಯ ದಿನದಂದು ವೃಂದಾವನಸ್ಥರಾದರು.  (ವೃಂದಾವನ , ಪಂಚವೃಂದಾವನ , ನಂಜನಗೂಡು)

ಮತ್ತೆ ನಾವು ಕಂಡ ಭಗವದ್ಭಕ್ತರು, ಶ್ರೀ ಗೋಪಾಲದಾಸಾರ್ಯರ, ಶ್ರೀ ಶೇಷದಾಸಾರ್ಯರ ಪರಮಾನುಗ್ರಹಪಾತ್ರರು, ದಾಸ ಸಾಹಿತ್ಯದ ಸೇವೆಗೆ ಇಡೀ ಜೀವನವನ್ನು ಮೀಸಲಿಟ್ಟು, ಅನೇಕ ಜನ ಶಿಷ್ಯರಿಗೆ , ಸಜ್ಜನರಿಗೆ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ತತ್ವದ ಸಾರವನ್ನು, ದಾಸ ಸಾಹಿತ್ಯದ ಮಾಹತ್ಮ್ಯವನ್ನು ತಿಳಿಸಿ ಹೇಳಿದವರಾದ *ಶ್ರೀ ಉಪ್ಪಲಿತಾತನವರು ಜನಿಸಿ ಬಂದ* ಮಹಾನ್ ದಿನವೂ ಇಂದು..

ಶ್ರೀ ಯತಿತ್ರಯರ ಅನುಗ್ರಹ ಹಾಗೂ ಶ್ರೀ ತಾತನವರ ಅನುಗ್ರಹ  ಸದಾ ನಮಗಿರಲೆಂದು ಪ್ರಾರ್ಥನೆ ಮಾಡುತ್ತಾ.....

*ನಾದನೀರಾಜನದಿಂ ದಾಸಸುರಭಿ* 🙏🏽

ದಾಸ ಸಾಹಿತ್ಯWhere stories live. Discover now