*ಶ್ರೀ ಗುರುಗೋಪಾಲ (ವಿಠ್ಠಲ) ದಾಸರು

2 0 0
                                    


*ಶ್ರೀ ಗುರುಗೋಪಾಲವಿಠ್ಠಲ ದಾಸರ ಕೃತಿ*

*ರಾಗ ಕಲ್ಯಾಣಿ                    ಆದಿತಾಳ*

ದುರ್ಗೆ ಪಾಲಿಸೆ ಮಾತೆ । ನಂಬಿದೆ ಬ್ರಹ್ಮ
ಭರ್ಗಾದಿ ಸುರವಿನುತೆ ॥ ಪ ॥
ದುರ್ಗಮ ಭವದಿಂದ ನಿರ್ಗಮಗೈಸು , ಹೇ -
ಭಾರ್ಗವಿ ಸ್ವರ್ಗ ಅಪವರ್ಗ ಪ್ರದಾತೆ ॥ ಅ ಪ ॥

ಅಂಬರ ಭೂಮಿ ವಿಹಾರಿ । ಅಷ್ಟಾಯುಧ ದಿ -
ವ್ಯಾಂಬರಧಾರಿ ಅಸುರಾರಿ ।
ನಂಬಿದೆ ನಿನ್ನ ಪಾದಾಂಬುಜ ಎನ್ನ ಹೃ -
ದಂಬರದಲ್ಲಿಹ ಬಿಂಬನ ತೋರಿಸು ॥
ಅಂಬೆ ಸುನಿತಂಬೆ ಜಗದಂಬೆ ಶುಭಗುಣ ನಿಕುರಂಭೆ ॥1॥

ನಂದಗೋಪನ ಕುಮಾರಿ । ನರಸಿಂಹಾಂಕ -
ಮಂದಿರೆ ಸಜ್ಜನೋದ್ಧಾರಿ ।
ಇಂದಿರೆ ಎನ್ನಯ ಇಂದ್ರಿಯ ಮನಸು ಮು -
ಕುಂದನ ಪಾದದಲ್ಲಿ ತಂದು ನಿಲ್ಲಿಸು ॥
ಎಂದೆ ಎನಗಿಂದೆ ಇನ್ನುಮುಂದೆ ಗತಿನೀನೇ ಎಂದೆ ॥ 2 ॥

ಸಿರಿನಾರಸಿಂಹನ ರಾಣಿ ವರನೀಲವೇಣಿ
ಪರಮಕಲ್ಯಾಣಿ ಗುಣಶ್ರೇಣಿ ।
ಪರತರ *ಗುರುಗೋಪಾಲವಿಠ್ಠಲನ*
ಚರಣಕಮಲದಲ್ಲಿ ಸ್ಥಿರವಾದ ಭಕುತಿಯ ॥
ನೀಡೆ ಎನಗೀಡೆ ನಲಿದಾಡೆ

*ಶ್ರೀ* *ಗುರುಗೋಪಾಲದಾಸರ* *ಕೃತಿ*

ನಮಾಮಿ ಗಂಗೇ ತವ ಪಾದಪಾದ ಪಂಕಜಂ
ಸುರಾಸುರೈರ್ವಂದಿತ ದಿವ್ಯರೂಪಮ್।
ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ
ಭಾವಾನುಸಾರೇಣ ಸದಾ ನರಾಣಾಮ್॥

*ರಾಗ* : *ದೇಶ*     *ಖಂಡಛಾಪು*

ಏನು ಪೇಳಲಿ ನಿನ್ನ ಆಗಮವನು
ಆನಂದಮಯ ಭುವನ ಪಾವನ ದಿವಿಜಗಂಗೆ ॥ಪ॥

ಮೊದಲು ನೀ ಹಿರಣ್ಯಹರಣಂಘ್ರಿಯಿಂದುದುಭವಿಸಿ
ತದನಂತರದಿ ಸುರರಾಧಿ ತನ್ನ
ಉದಕಪಾತ್ರೆಯಲಿದ್ದು ಆತಕರದಿಜರಿದು
ಮುದದಿಂದ ಬ್ರಹ್ಮಾಘತನಯಶಿರಕಿಳಿದೆ॥೧॥

ಗುರುತಲ್ಪಕನ್ನ ಸಂಯೋಗವನುಮಾಡಿ ನೀ
ಗರಳಕಂಧರನ ಜಢೆಯಿಂದಲಿಳಿದು
ಧರೆಯೊಳಗೆ ಕಪಿಲದ್ರೋಹಿಗಳ ಸ್ಪರುಷವ ಮಾಡಿ
ಹರುಷದಲಿ ಜಲಧಿ ಸಂಗವ ಮಾಡಿದೆಲೆದೇವಿ॥೨॥

ಪತಿತ ಜಡಮತಿ ಕುಗತಿಗಳ ನೋಡಿದಿದದರಿಂದ ನೀ
ಪತಿತಳಾದೆ ಜಡ ಕುಗತಿಯೈದಿದೆ
ಕ್ಷಿತಿಯೊಳಗೆ ಅವರು ನಿನ್ನನು ನೋಡಿದಾಕ್ಷಣಕೆ
ಅತಿ ಪಾವನತ್ವ ಸುಗತಿ ಸುಮತಿಯ ಪಡೆದರು॥೩॥

ಈ ಪರಿಯು ನಾ ನಿನ್ನ ತುತಿಸೆನ್ನ ಪಂಚಮಹಾ
ಪಾಪ ಪತಿತತ್ವ ಜಡಮತಿ ಕುಗತಿಯು
ಅಪಾರ ದೋಷಗಳು ಕಳೆದು ನಿನ್ನೊಲಿಮೆಯಲಿ
ಶ್ರೀಪತಿಯ ಒಲಿಸುವದಕ್ಕೆ ಅಧಿಕಾರಿ ನಾನಾದೆ॥೪॥

ಭಾಗೀರಥಿ ಎಂದು ನಾ ನಿನ್ನ ಸ್ಮರಿಸಿದರೆ
ಈಗ ಭವನಾಶಿಯು ಎನಗಾದೆ ನೀ
ಯೋಗ ಪ್ರಭಾವಕ್ಕೆ ಎಣೆಗಾಣೆ ನಮೋ ನಮೋ
*ಶ್ರೀಗುರುಗೋಪಾಲವಿಟ್ಠಲನ್ನ* ಪ್ರಿಯಸುತೆ॥೫॥


ದಾಸ ಸಾಹಿತ್ಯWhere stories live. Discover now