*ಶ್ರೀ ವಿಜಯರಾಮಚಂದ್ರವಿಠಲರ ಕೃತಿ*
*ಗುರುಭಕ್ತಿ ಸುಳಾದಿ*
*ರಾಗ ಆನಂದಭೈರವಿ*
*ಧ್ರುವತಾಳ*
ಗುರುಭಕ್ತಿ ಮಾಡು ಮನವೆ ವೈಷಮ್ಯ ನೈರ್ಘೃಣ್ಯ ಬಿಟ್ಟು ।
ನೀಛಲದಿ ನೀನಾಗುವಿ ದಾಸಶ್ರೇಷ್ಠ ಧರಣಿಯೊಳು
ನಿನಗೆ ನೀನೇ ತಿಳಿ ಗುರುಮಹಿಮೆಯನ್ನು ಗುಪಿತದಲ್ಲಿ
ಗುಣವಂತನಾ ಮಾಡಿ ಗುಣಪರಿಪೂರ್ಣ
*ವಿಜಯರಾಮಚಂದ್ರವಿಠ್ಠಲನು* ಗುರುವಾಗಿ ತೋರುವನು ॥ 1 ॥*ಮಟ್ಟತಾಳ*
ಆದಿಯಲ್ಲಿ ಗುರುಕರುಣ ಪಡೆಯಬೇಕು
ಪದಸ್ಥ ಸುರರ ಕೂಡಿ ಪಾಪ ಕಳೆಯಬೇಕು
ಪರಮಾದರದಿ ಗುರುಪಾದವ ಚಿಂತಿಸೆ
ಗುರು *ವಿಜಯರಾಮಚಂದ್ರವಿಠ್ಠಲ*
ಗುರುಲಘು ಪದಾರ್ಥದಲ್ಲಿ ಗೋಚರಿಸುವ ॥ 2 ॥*ತ್ರಿಪುಟತಾಳ*
ಗುರುವೇ ಮುಖ್ಯನು ತಿಳಿಯೋ ವೃತ್ತಿಜ್ಞಾನದ ಗೋಳಾಟ ಕಳೆದು
ಗೋಪಾಲಕನ ಸಂದರ್ಶನಕ್ಕೆ ಗುರಿಯಾಗುವ
ಗುರುಭಜನೆಯ ದೃಢ ಭಕುತಿಯಲಿ ಮಾಡೆ
ಮಾಮನೋಹರ ನಮ್ಮ *ವಿಜಯರಾಮಚಂದ್ರವಿಠಲ*
ಗುರುವಂತರ್ಗತನಾಗಿ ಅಜ್ಞಾನವ ಕಳೆವ ॥ 3 ॥*ಅಟ್ಟತಾಳ*
ಗುರುಸ್ಮರಣೆ ನಿರಂತರದಿ ಮಾಡೆ
ಇತರ ಸ್ಮರಣೆ ತಪ್ಪಿಸಿ ಹರಿಸ್ಮರಣೆ ಇತ್ತು
ಹರುಷ ಪಡಿಸುವರು
ಹಗಲಿರುಳು ಹರಿದಾಸರ ಸಂಗವಿತ್ತು
ಹಾನಿವೃದ್ಧಿಗಳು ಲೇಸು ಮಾಡಿಸುವರು
ಗುರುಸ್ಮರಣೆ ಮರೆತು ಗುಣವಂತನಾನೆಂದು ತಿಳಿದು
ಗಣಿತವಿಲ್ಲದ ಹಲವು ಕರ್ಮಗಳನ್ನು ಮಾಡಿದರೂ
ಹರಿ ಒಲಿಯ ಕಾಣೋ
*ವಿಜಯರಾಮಚಂದ್ರವಿಠಲನ್ನ* ಕಾಣಬೇಕಾದರೆ
ಮನುಜರು ಗುರುಚರಣದ್ವಂದ್ವಗಳ
ಪಾಡಿ ಕೊಂಡಾಡಬೇಕು ಸಂತತ ಬಿಡದೆ ॥ 4 ॥*ಆದಿತಾಳ*
ಗುರುವೆ ತಾರಕನೆಂದು ತಿಳಿದು ನಲಿನಲಿದು ಪಾಡೆ
ಘನ ಸಂಸಾರದ ಘೋರಾರಣ್ಯದಿಂದ ಗೋಳಾಡಿಸದೆ
ಪಾರಗೈಸಿ ಪಂಚಬೇಧ ತಾರತಮ್ಯ ಜ್ಞಾನವರುಪಿ
ಗುರು ಪವಮಾನನ ಮತವೆ ಸಿದ್ಧವೆಂದು ತಿಳಿಸಿ
ಸಂಶಯಗಳ ಬಿಡಿಸಿ ಸಂಸಾರವೆಂಬೋ ಘೋರಾರಣ್ಯದಿಂದ
ತಳಮಳಗೊಳಿಸದೆ ಪಾರಗೊಳಿಸುವರು ಸರಸದಿಂದಲಿ
ಗುರು ಪವಮಾನನೊಡೆಯ ನಮ್ಮ *ವಿಜಯರಾಮಚಂದ್ರವಿಠಲನ್ನ*
ಉಪಾಸನೆಗೈಯುವ ಮಾರ್ಗವ
ಮಮತೆಯಿಂದಲಿ ಪೇಳಿ ಉದ್ಧಾರ ಮಾಡುವರು
ನಮ್ಮ ಗುರುರಾಯರು ॥ 5 ॥*ಜತೆ*
ಈ ಪರಿ ತಿಳಿದು ನಲಿಯೇ *ವಿಜಯರಾಮಚಂದ್ರವಿಠಲ*
ಒಲುಮೆಯಿಂದಲಿ ಒಲಿವ ॥
YOU ARE READING
ದಾಸ ಸಾಹಿತ್ಯ
Thơ ca*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...